ಚಪ್ಪರದವರೆ-
ಲೆಗ್ಯೂಮಿನೋಸೀ ಕುಟುಂಬದ ಫ್ಯಾಬೇಸೀ ಉಪಕುಟುಂಬಕ್ಕೆ ಸೇರಿದ ಒಂದು ಜನಪ್ರಿಯ ತರಕಾರಿ ಸಸ್ಯ. ಸಾಮಾನ್ಯ ಬಳಕೆಯ ಇಂಗ್ಲೀಷಿನಲ್ಲಿ ಬೋನವಿಸ್ಟ್ ಬೀನ್, ಹಯಸಿಂತ್ ಬೀನ್, ಇಂಡಿಯನ್ ಬಟರ್‍ಬೀನ್ ಎಂಬ ಹೆಸರುಗಳಿವೆ. ಅವರೆಯೂ ಇದೂ ಬಹು ಹತ್ತಿರದ ಸಂಬಂಧಿಗಳು. ಇವೆರಡರ ಜಾತಿ ಹಾಗೂ ಪ್ರಭೇದ ನಿರ್ದೇಶಕ ಶಾಸ್ತ್ರೀಯ ಹೆಸರುಗಳೂ ಒಂದೇ- ಡಾಲಿಕಾಸ್ ಲ್ಯಾಬ್‍ಲ್ಯಾಬ್ ಎಂದು. ಆದರೆ ಬಗೆಗಳು ಮಾತ್ರ ಬೇರೆ ಬೇರೆ. ಅವರೆ ಲಿಗ್ನೋಸಸ್ ಎಂಬ ಬಗೆಯದು, ಚಪ್ಪರದವರೆ ಟಿಪಿಕಸ್ ಎಂಬ ಬಗೆಯದು. ಇವೆರಡರ ಗುಣಲಕ್ಷಣಗಳಲ್ಲಿ ಕೆಲವು ವ್ಯತ್ಯಾಸಗಳಿವೆ. ಅವರೆ ನೆಟ್ಟಗೆ ಬೆಳೆಯುವ ಪೊದೆ. ಇದರ ಬೀಜಗಳು, ಕಾಯಿಯ ಎರಡು ಸಿಪ್ಪೆಗಳು ಒಂದುಗೂಡುವ ಸೇರುವ ರೇಖೆಗೆ ಲಂಬಕೋನದಲ್ಲಿ ಜೋಡಣೆಗೊಂಡಿದೆ. ಚಪ್ಪರದವರೆ ಆಸರೆಗಳನ್ನು ಅವಲಂಬಿಸಿ ಬೆಳೆಯುವ ಬಳ್ಳಿ. ಇದರ ಬೀಜಗಳು ಕಾಯಸಿಪ್ಪೆಗಳ ಸೇರುವ ರೇಖೆಗೆ ಸಮಾಂತರವಾಗಿ ಜೋಡಣೆಗೊಂಡಿವೆ. ಚಪ್ಪರದವರೆಯ ಬೇಸಾಯ ಏಷ್ಯ, ಆಫ್ರಿಕ ಮತ್ತು ಅಮೆರಿಕಗಳ ಉಷ್ಣ ಹಾಗೂ ಸಮಶೀತೋಷ್ಣ ಪ್ರದೇಶಗಳಲ್ಲೆಲ್ಲ ಇದೆ. ಭಾರತದಲ್ಲಿ ಇದನ್ನು ಮನೆ ತೋಟಗಳಲ್ಲಿಯೂ ನಗರಗಳ ಹೊರವಲಯಗಳ ಸಣ್ಣ ತೋಟಗಳಲ್ಲಿಯೂ ಬೆಳೆಸಲಾಗುತ್ತದೆ. ಇದೊಂದು ಬಳ್ಳಿ, ಸ್ವಭಾವತಹ ಬಹುವಾರ್ಷಿಕವಾದರೂ ಬೇಸಾಯದಲ್ಲಿ ಏಕ ವಾರ್ಷಿಕ ಸಸ್ಯವಾಗಿ ಪರಿಗಣಿಸಲಾಗಿದೆ. ಆಸರೆಗಳನ್ನು ಸುತ್ತಿಕೊಂಡು ಗಿಡಬೆಳೆಯುತ್ತದೆ. ಎಲೆಗಳು ತಲಾ ಮೂರು ಕಿರುಎಲೆಗಳನ್ನು ಪಡೆದಿರುವ ಸಂಯುಕ್ತಬಗೆಯವು. ಹೂಗಳು ಸಾಮಾನ್ಯವಾಗಿ ಬಿಳಿಬಣ್ಣದವು. ಕೆಲವು ಬಗೆಯ ಊದಾಬಣ್ಣದ ಹೂಗಳಿರುವುದುಂಟು. ಹೂಗಳು ರೇಸೀಮ್ ಮಾದರಿಯ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಕಾಯಿಗಳು ಬಿಳಿ ಅಥವಾ ಹಸಿರು ಬಣ್ಣದವು. ಕೆಲವಲ್ಲಿ ಕಾಯಿಗಳ ಅಂಚು ಊದಾ ಬಣ್ಣಕ್ಕಿರುವುದಿದೆ. ಬೀಜಗಳು ಬಿಳಿ, ಹಳದಿ, ಕಂದುಮಿಶ್ರಿತ ಊದಾ, ಕಪ್ಪು-ಹೀಗೆ ಹಲವಾರು ಬಣ್ಣಗಳನ್ನು ತೋರುತ್ತವೆ. 
ಚಪ್ಪರದವರೆಯಲ್ಲಿ ಅನೇಕ ಸ್ವಾಭಾವಿಕ ರೂಪಭೇದಗಳಿವೆ. ಅಲ್ಲದೆ ಕೊಯಮತ್ತೂರಿನ ಕೃಷಿ ಸಂಶೋಧನಾಲಯದಲ್ಲಿ ಅಭಿವೃದ್ಧಿಪಡಿಸಿದ ಉತ್ತಮ ಬಗೆಗಳೂ ಉಂಟು. ಇವುಗಳಲ್ಲಿ ಮುಖ್ಯವಾದವು :

1.	ಡಿಎಲ್. 453 : ದಕ್ಷಿಣ ಭಾರತದಲ್ಲೆಲ್ಲ ಬಲು ಸಾಮಾನ್ಯವಾಗಿ ಕಾಣಬರುವ ಬಗೆ. ವರ್ಷವಿಡೀ ಇದನ್ನು ಬೆಳೆಸಬಹುದು. ಹೂಗಳು ಉದಾಬಣ್ಣದವು. ಹುಲುಸಾಗಿ ಕಾಯಿಬಿಡುತ್ತದೆ.
2.	ಡಿಎಲ್. 692 : ಇದರ ಹೂಗಳು ಬಿಳಿಬಣ್ಣದವು. ಕಾಯಿಗಳ ಬಣ್ಣ ಹಳದಿಮಿಶ್ರಿತ ಹಸಿರು. ಬೀಜಗಳು ಚಾಕೊಲೆಟ್ ಬಣ್ಣಕ್ಕಿವೆ.
3.	ಡಿಎಲ್. 269 : ಇದರ ಹೂಗಳು ಕಡು ಊದಾಬಣ್ಣದವು. ಬೀಜಗಳು ಕಪ್ಪು. ಕಾಯಿಗಳು ಹಸಿರು, ಅಗಲ ಮತ್ತು ಉಳಿದ ಬಗೆಗಳಿಗಿಂತ ಹೆಚ್ಚು ರಸಭರಿತ.
4.	ಡಿಎಲ್. 250 : ನಸು ಹಸಿರು ಬಣ್ಣದ ಕಾಯಿಗಳನ್ನು ಬಿಡುವ ಇನ್ನೊಂದು ಬಗೆ. ಕಾಯ ಅಂಚುಗಳು ಉದಾಬಣ್ಣಕ್ಕಿವೆ. ಬೀಜಗಳು ಕಪ್ಪು. ಇದು ಕೂಡ ಇಳುವರಿಗೆ ಹೆಸರಾಗಿದೆ.
5.	ಡಿಎಲ್ 259 : ಕಿರಿಯಗಲದ ನಸು ಹಸಿರುಬಣ್ಣದ ಕಾಯಿಗಳನ್ನು ಬಿಡುತ್ತದೆ. ಹೂಗಳೂ ಬಿಳಿ, ಬೀಜ ಕಂದು.
6.	ಡಿಎಲ್. 244 : ಬಿಳಿ ಹೂ, ಸ್ವಲ್ಪ ಚಪ್ಪಟೆಯಾದ ಬಿಳಿಬಣ್ಣದ ಕಾಯಿ ಬಿಡುವ ಬಗೆಯದು. ಬೀಜ ಕಂದು.
ಚಪ್ಪರದವರೆಯನ್ನು ಬೀಜಗಳ ಮೂಲಕ ಬೆಳೆಸುತ್ತಾರೆ. ಮೂರು ಘನ ಅಡಿ ಗುಂಡಿಗಳನ್ನು ತೆಗೆದು ಸ್ವಲ್ಪ ಕೊಟ್ಟಿಗೆ ಗೊಬ್ಬರವನ್ನು ಮಣ್ಣಿನೊಡನೆ ಮಿಶ್ರಮಾಡಿ ಗುಂಡಿಗೆ ತುಂಬಬೇಕು. ಬೀಜಗಳನ್ನು ಜುಲೈ-ಆಗಸ್ಟ್ ತಿಂಗಳುಗಳಲ್ಲಿ ನೆಡಬೇಕು. ಅವು 5-8 ದಿವಸಗಳಲ್ಲಿ ಮೊಳೆತು ಬೆಳೆಯಲು ಪ್ರಾರಂಭಿಸುತ್ತವೆ. ಸಸಿ ಸ್ವಲ್ಪ ಎತ್ತರ ಬೆಳೆದ ಮೇಲೆ ಅದಕ್ಕೆ ಆಧಾರವನ್ನು ಕೊಟ್ಟು ಹಬ್ಬಿಸಬೇಕು. ಬಳ್ಳಿ ಹುಸುಸಾಗಿ ಬೆಳೆದು ನವೆಂಬರ್ ತಿಂಗಳಲ್ಲಿ ಹೂ ಬಿಡಲಾರಂಭಿಸಿ ಡಿಸೆಂಬರ್ ಹೊತ್ತಿಗೆ ಕಾಯಿಗಳನ್ನು ಬಿಡುತ್ತದೆ. ಮಾರ್ಚ್-ಏಪ್ರಿಲ್ ತಿಂಗಳವರೆಗೆ ಕಾಯಿಗಳನ್ನು ಪಡೆಯಬಹುದು.

ಚಪ್ಪರದವರೆಗೆ ಹೇನು ಮತ್ತು ಅವರೆಯ ತಿಗಣೆಗಳು ಹತ್ತುವುದುಂಟು. ಇವು ಸಸ್ಯದ ಎಳೆಯ ಭಾಗಗಳಿಂದ ರಸವನ್ನು ಹೀರಿ ಹಾನಿಯುಂಟುಮಾಡುತ್ತವೆ. ಇದರಿಂದ ಇಳುವರಿ ಬಹಳ ಮಟ್ಟಿಗೆ ಕಡಿಮೆಯಾಗುತ್ತದೆ. 40 ನಿಕೋಟಿನಿಕ್ ಸಲ್ಫೇಟ್ ದ್ರಾವಣವನ್ನು ಅಥವಾ ಒಂದು ಪೌಂಡು ಮೀನೆಣ್ಣೆಯ ಸಾಬೂನನ್ನು 8 ಗ್ಯಾಲನ್ ನೀರಿನಲ್ಲಿ ಕರಗಿಸಿ ಸಿಂಪಡಿಸುವುದರಿಂದ ಈ ಕೀಟಗಳನ್ನು ತಡೆಗಟ್ಟಬಹುದು. ತಿಗಣೆಗಳನ್ನು ಕೈಯಿಂದ ತೆಗೆದು ನಾಶಪಡಿಸಬಹುದು.
(ಬಿ.ಎ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ